KN/Prabhupada 1062 - ನಮಗೆ ಐಹಿಕ ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸುವ ಪ್ರವೃತ್ತಿ ಇದೆ

The printable version is no longer supported and may have rendering errors. Please update your browser bookmarks and please use the default browser print function instead.


660219-20 - Lecture BG Introduction - New York

ವಿಶ್ವದಲ್ಲಿ ಅನೇಕ ಅದ್ಭುತಗಳು ಜರುಗಿದಾಗ ಈ ವಿಶ್ವಸೃಷ್ಟಿಯ ಹಿಂದೆ ನಿಯಾಮಕನೊಬ್ಬನಿದ್ದಾನೆ ಎಂದು ನಾವು ತಿಳಿಯಬೇಕು. ನಿಯತ್ರಣವಿಲ್ಲದ ಅಭಿವ್ಯಕ್ತಿಯೇ ಇಲ್ಲ. ನಿಯಾಮಕನನ್ನು ಕುರಿತು ಯೋಚಿಸದಿರುವುದು ಬಾಲಿಶ. ಉದಾಹರಣೆಗೆ ಒಳ್ಳೆಯ ಸ್ವಯಂ ಚಾಲಿತ ವೇಗದ ಕಾರು ಯಂತ್ರಜೋಡಣೆ ಇಂದ ರಸ್ತೆಯಲ್ಲಿ ಓಡುತ್ತಿದೆ ಎಂದುಕೊಳ್ಳಿ. ಒಂದು ಮಗು ಇದು ಕುದುರೆ ಅಥವಾ ಬೇರೆ ಯಾವ ಸಹಾಯವಿಲ್ಲದೆ ಹೇಗೆ ಓಡುತ್ತಿದೆ ಎಂದು ಯೋಚಿಸಬಹುದು. ಆದರೆ ಬುದ್ಧಿಯಿರುವವರಿಗೆ ಅಥವಾ ದೊಡ್ಡವರಿಗೆ ಎಲ್ಲಾ ಯಂತ್ರಜೋಡಣೆಯಿದ್ದರೂ ಚಾಲಕನಿಲ್ಲದೆ ಕಾರು ಮುಂದೆ ಸಾಗುವುದಿಲ್ಲ ಎಂದು ತಿಳಿದಿರುತ್ತದೆ. ಈ ಕಾರಿನ ಅಥವಾ ವಿದ್ಯುತ್ ಶಕ್ತಿಯ ಯಂತ್ರವ್ಯವಸ್ಥೆಯ ಹಿಂದೆ, ಇಂದಿನ ಕಾಲ ಯಂತ್ರಗಳ ಕಾಲ. ಆದರೆ ನಮಗೆ ಈ ಎಲ್ಲಾ ಯಂತ್ರಗಳ ಕಾರ್ಯಗಳ ಹಿಂದೆ ಚಾಲಕನಿದ್ದಾನೆ ಎಂದು ಯಾವಾಗಲೂ ತಿಳಿದಿರಬೇಕು. ಅದೇ ರೀತಿ ಪರಮ ಪುರುಷ ಚಾಲಕ, ಅಧ್ಯಕ್ಷ. ಅವನು ದೇವೋತ್ತಮ, ಅವನ ಅಧ್ಯಕ್ಷತೆಯಲ್ಲಿ ಎಲ್ಲವೂ ನಡೆಯುತ್ತಿದೆ. ಈಗ ಜೀವಿಗಳನ್ನು ಭಗವದ್ಗೀತೆಯ ಮುಂದಿನ ಅಧ್ಯಾಯಗಳಲ್ಲಿ ಭಗವಂತನ ವಿಭಿನ್ನ ಅಂಶ ಎಂದು ವರ್ಣಿಸಿದೆ. ಮಾಮೈವಾಂಶೋ ಜೀವ ಭೂತಃ (ಭ ಗೀತೆ 15.7), ಅಂಶ ಎಂದರೆ ಭಗವಂತನ ಭಾಗ. ಚಿನ್ನದ ಒಂದು ಕಣವೂ ಚಿನ್ನವೇ. ಸಮುದ್ರದ ಒಂದು ಹನಿ ನೀರೂ ಉಪ್ಪಾಗಿರುತ್ತದೆ. ಹಾಗೆಯೇ ನಾವು ಪರಮ ನಿಯಂತ್ರಕನ ಅಂಶಗಳು. ಈಶ್ವರ, ಭಗವಂತ, ಅಥವಾ ಕೃಷ್ಣ ನಮಗೆ ಭಗವಂತನ ಎಲ್ಲಾ ಗುಣಗಳು ಅಲ್ಪಪ್ರಮಾಣದಲ್ಲಿದೆ. ನಾವು ಬಹು ಸಣ್ಣ ಈಶ್ವರರು, ಅಧೀನ ಈಶ್ವರರು ಆಗಿರುವುದರಿಂದ ನಾವು ಕೂಡ ನಿಯಂತ್ರಿಸಲು ಪ್ರಯತ್ನಿಸುತ್ತೇವೆ. ನಾವು ಪ್ರಕೃತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತೇವೆ, ನಾವು ಬಾಹ್ಯಾಕಾಶವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ಗ್ರಹಗಳನ್ನು ಅನುಕರಿಸುವ ಕೃತಕ ಗ್ರಹಗಳನ್ನು ತೇಲಿಸಲು ಪ್ರಯತ್ನಿಸುತ್ತಿದ್ದೇವೆ. ಸೃಷ್ಠಿಸುವ ಅಥವಾ ನಿಯತ್ರಿಸುವ ಈ ಪ್ರವೃತ್ತಿಯೂ ನಮ್ಮಲ್ಲಿದೆ. ಆದರೆ ಈ ಪ್ರವೃತ್ತಿ ಸಾಕಷ್ಟಿಲ್ಲ. ನಮಗೆ ಐಹಿಕ ಪ್ರಕೃತಿಯನ್ನು ನಿಯಂತ್ರಿಸುವ, ಐಹಿಕ ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸುವ ಪ್ರವೃತ್ತಿ ಇದೆ. ಆದರೆ ನಾವು ಪರಮ ನಿಯಂತ್ರಕರಲ್ಲ. ಅದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ. ಈ ಐಹಿಕ ಪ್ರಕೃತಿ ಎಂದರೇನು? ಅದನ್ನೂ ವಿವರಿಸಿದೆ. ಐಹಿಕ ಪ್ರಕೃತಿಯನ್ನು ಭಗವದ್ಗೀತೆಯಲ್ಲಿ ಕೆಳಮಟ್ಟದ ಪ್ರಕೃತಿ ಎಂದು ವರ್ಣಿಸಿದೆ. ಮತ್ತು ಜೀವಿಗಳನ್ನು ಮೇಲ್ಮಟ್ಟದ ಪ್ರಕೃತಿ ಎಂದು ವಿವರಿಸಿದೆ. ಪ್ರಕೃತಿ ಎಂದರೆ ನಿಯಂತ್ರಿಸಲ್ಪಡುವುದು. ಪ್ರಕೃತಿ ಎಂದರೆ ಹೆಣ್ಣು. ಹೇಗೆ ಗಂಡನು ಹೆಂಡತಿಯ ಕಾರ್ಯಗಳನ್ನು ನಿಯಂತ್ರಿಸುತ್ತಾನೋ, ಅದೇ ರೀತಿ ಪ್ರಕೃತಿ ನಿಯಂತ್ರಿಸಲ್ಪಡುತ್ತಾಳೆ. ದೇವೋತ್ತಮ ಪರಮ ಪುರುಷನು ಪರಮ ನಿಯಂತ್ರಕ. ಮತ್ತು ಪ್ರಕೃತಿ (ಜೀವಿಗಳು ಮತ್ತು ಐಹಿಕ) ಭಗವಂತನಿಂದ ನಿಯಂತ್ರಿಸಲ್ಪಡುವುದು. ಭಗವದ್ಗೀತೆಯ ಪ್ರಕಾರ ಜೀವಿಗಳು ಭಗವಂತನ ಅಂಶಗಳೇ ಆಗಿದ್ದರೂ ಅವರನ್ನು ಪ್ರಕೃತಿ ಎಂದು ಪರಿಗಣಿಸಲಾಗುತ್ತದೆ. ಭಗವದ್ಗೀತೆಯ ಏಳನೆಯ ಅಧ್ಯಾಯದಲ್ಲಿ ಅಪರೇಯಂ ಇತಸ್ ತು ವಿಧ್ಧಿ ಅಪರಾ, (ಭ ಗೀತೆ 7.5). ಈ ಐಹಿಕ ಪ್ರಕೃತಿ ಅಪರಾ, ಈ ಪ್ರಕೃತಿಯನ್ನು ಮೀರಿ ಇನ್ನೊಂದು ಪ್ರಕೃತಿಯಿದೆ. ಅದು ಜೀವ ಭೂತಃ. ಐಹಿಕ ಪ್ರಕೃತಿ 3 ಗುಣಗಳಿಂದ ನಿರ್ಮಾಣವಾಗಿದೆ. ಸತ್ವ ಗುಣ, ರಜೋ ಗುಣ, ಮತ್ತು ತಮೋ ಗುಣ. ಈ ಸತ್ವ, ರಜೋ, ಮತ್ತು ತಮೋ ಗುಣಗಳಿಂದ ಮೇಲೆ ಶಾಶ್ವತವಾದ ಕಾಲವಿದೆ. ಈ 3 ಗುಣಗಳ ಸೇರುವಿಕೆಯಿಂದ ಮತ್ತು ಸನಾತನ ಕಾಲದ ನಿಯಂತ್ರಣ ಮತ್ತು ಗಮನದಿಂದಾಗಿ ಕರ್ಮಗಳು ನಡೆಯುತ್ತವೆ. ಚಟುವಟಿಕೆಗಳನ್ನು ಕರ್ಮ ಎನ್ನುತ್ತೇವೆ. ಸ್ಮರಣೆಗೂ ಮೀರಿದ ಕಾಲದಿಂದ ಈ ಕರ್ಮಗಳು ನಡೆಯುತ್ತಿವೆ. ಮತ್ತು ನಮ್ಮ ಕರ್ಮಗಳ ಫಲಕ್ಕನುಗುಣವಾಗಿ ಸುಖ ದುಃಖಗಳನ್ನು ಅನುಭವಿಸುತ್ತಿದ್ದೇವೆ.