KN/Prabhupada 0144 - ಇದನ್ನು ಮಾಯೆ ಎಂದು ಕರೆಯಲಾಗುತ್ತದೆ



Sri Isopanisad, Mantra 2-4 -- Los Angeles, May 6, 1970

ಪ್ರಕೃತೇಃ ಕ್ರಿಯಮಾನಾಣಿ
ಗುಣೈಃ ಕರ್ಮಾಣಿ ಸರ್ವಶಃ
ಅಹಂಕಾರ ವಿಮೂಢಾತ್ಮಾ
ಕರ್ತಾಹಮ್‌ ಇತಿ ಮನ್ಯತೇ
(ಭ.ಗೀ 3.27)

ಭಕ್ತರ ಹೊಣೆಯನ್ನು ಕೃಷ್ಣನು ತಾನೇ ವಹಿಸಿಕೊಳ್ಳುತ್ತಾನೆ, ಮತ್ತು ಸಾಮಾನ್ಯ ಜೀವಿಗಳ ಹೊಣೆಯನ್ನು ಮಾಯೆ ವಹಿಸಿಕೊಳ್ಳುತ್ತಾಳೆ. ಮಾಯೆ ಕೂಡ ಕೃಷ್ಣನ ಕಾರ್ಯಭಾರಿ. ಉತ್ತಮ ನಾಗರಿಕರನ್ನು ಸರ್ಕಾರವು ನೇರವಾಗಿ ನೋಡಿಕೊಳ್ಳುತ್ತದೆ, ಮತ್ತು ಅಪರಾಧಿಗಳನ್ನು ಸರ್ಕಾರವು ಜೈಲು ಇಲಾಖೆಯ ಮೂಲಕ, ಅಪರಾಧ ಇಲಾಖೆಯ ಮೂಲಕ ನೋಡಿಕೊಳ್ಳುತ್ತದೆ. ಅವರನ್ನೂ ನೋಡಿಕೊಳ್ಳಲಾಗುತ್ತದೆ. ಸರ್ಕಾರವು ಸೆರೆಮನೆಯಲ್ಲಿರುವ ಖೈದಿಗಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳುತ್ತದೆ - ಅವರಿಗೆ ಸಾಕಷ್ಟು ಆಹಾರ ಸಿಗುತ್ತದೆ; ರೋಗಕ್ಕೆ ಒಳಗಾದರೆ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡುತ್ತಾರೆ. ಪ್ರತಿಯೊಂದು ಆರೈಕೆಯೂ ಇದೆ, ಆದರೆ ಶಿಕ್ಷೆಯ ಅಡಿಯಲ್ಲಿ. ಅಂತೆಯೇ, ನಮಗೆ ಈ ಭೌತಿಕ ಜಗತ್ತಿನಲ್ಲಿ ಖಂಡಿತವಾಗಿಯೂ ಕಾಳಜಿ ಇದೆ, ಆದರೆ ಶಿಕ್ಷೆಯ ರೀತಿಯಲ್ಲಿ. ನೀವು ಇದನ್ನು ಮಾಡಿದರೆ ಏಟು, ಅದನ್ನು ಮಾಡಿದರೆ ಒದೆ. ನೀವು ಇದನ್ನು ಮಾಡಿದರೆ, ಆಗ ಇದು... ಹೀಗೆ ನಡೆಯುತ್ತಿದೆ. ಇದನ್ನು ತ್ರಿವಿಧ ದುಃಖಗಳು ಎಂದು ಕರೆಯಲಾಗುತ್ತದೆ. ಆದರೆ ಮಾಯೆಯ ಪ್ರಭಾವಕ್ಕೆ ಸಿಲುಕಿ ನಾವು ಈ ಮಾಯೆಯ ಒದೆ, ಏಟು, ಹೊಡೆತವನ್ನು ತುಂಬಾ ಚೆನ್ನಾಗಿದೆ ಎಂದು ಭಾವಿಸುತ್ತಿದ್ದೇವೆ. ನೋಡಿದಿರ? ಇದನ್ನು ಮಾಯೆ ಎಂದು ಕರೆಯಲಾಗುತ್ತದೆ. ಮತ್ತು ನೀವು ಕೃಷ್ಣ ಪ್ರಜ್ಞೆಗೆ ಬಂದ ತಕ್ಷಣ, ಕೃಷ್ಣನು ನಿಮ್ಮನ್ನು ರಕ್ಷಿಸುತ್ತಾನೆ. ಅಹಂ ತ್ವಾಂ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ (ಭ.ಗೀ 18.66). ಕೃಷ್ಣ… ನೀನು ಶರಣಾದ ತಕ್ಷಣ, ಕೃಷ್ಣನ ಮೊದಲ ಮಾತು, "ನಾನು ನಿನ್ನನ್ನು ಸುರಕ್ಷಿತವಾಗಿಡುತ್ತೇನೆ. ಎಲ್ಲ ಪಾಪದ ಪ್ರತಿಕ್ರಿಯೆಯಿಂದ ನಾನು ನಿನ್ನನ್ನು ರಕ್ಷಿಸುತ್ತೇನೆ.” ನಮ್ಮ ಜೀವನದಲ್ಲಿ ಪಾಪದ ರಾಶಿಗಳಿವೆ... ಈ ಭೌತಿಕ ಜಗತ್ತಿನಲ್ಲಿ ಜನ್ಮಾಂತರಗಳಿಗೆ ಸಾಕಾಗುವಷ್ಟು ಇದೆ. ಆದರೆ ನೀವು ಕೃಷ್ಣನಿಗೆ ಶರಣಾದ ತಕ್ಷಣ, ಕೃಷ್ಣನು ನಿಮ್ಮನ್ನು ರಕ್ಷಿಸುತ್ತಾನೆ, ಮತ್ತು ಎಲ್ಲಾ ಪಾಪದ ಪ್ರತಿಕ್ರಿಯೆಗಳನ್ನು ಸರಿಹೊಂದಿಸುತ್ತಾನೆ. ಅಹಂ ತ್ವಾಂ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ. ಕೃಷ್ಣ ಹೇಳುತ್ತಾನೆ, "ಹಿಂಜರಿಯಬೇಡ." "ಓಹ್, ನಾನು ಅನೇಕ ಪಾಪಕಾರ್ಯಗಳನ್ನು ಮಾಡಿದ್ದೇನೆ. ಕೃಷ್ಣ ನನ್ನನ್ನು ಹೇಗೆ ರಕ್ಷಿಸುತ್ತಾನೆ?", ಎಂದು ನೀವು ಯೋಚಿಸಬಹುದು. ಇಲ್ಲ. ಕೃಷ್ಣ ಸರ್ವಶಕ್ತ. ಅವನು ನಿಮ್ಮನ್ನು ರಕ್ಷಿಸಬಲ್ಲ. ನಿಮ್ಮ ವ್ಯವಹಾರವು ಆತನಿಗೆ ಶರಣಾಗುವುದು, ಮತ್ತು ಯಾವುದೇ ಹಿಂಜರಿಕೆಯಿಲ್ಲದೆ ನಿಮ್ಮ ಜೀವನವನ್ನು ಆತನ ಸೇವೆಗಾಗಿ ಅರ್ಪಿಸುವುದು. ಹೀಗೆ ನೀವು ರಕ್ಷಿಸಲ್ಪಡುತ್ತೀರಿ.