KN/Prabhupada 0165 - ಪರಿಶುದ್ಧವಾದ ಕರ್ಮಗಳನ್ನು ಭಕ್ತಿ ಎಂದು ಕರೆಯಲಾಗುತ್ತದೆ



Lecture on BG Introduction — New York, February 19-20, 1966

ಪರಮಪ್ರಜ್ಞೆಯನ್ನು ಭಗವದ್ಗೀತೆಯಲ್ಲಿ ಜೀವ ಮತ್ತು ಈಶ್ವರರ ನಡುವಿನ ವ್ಯತ್ಯಾಸವನ್ನು ವಿವರಿಸುವ ಅಧ್ಯಾಯದಲ್ಲಿ ವಿವರಿಸಲಾಗುವುದು. ಕೇತ್ರ-ಕ್ಷೇತ್ರ-ಜ್ಞ. ಈ ಕ್ಷೇತ್ರ-ಜ್ಞ ಅಂದರೆ ಭಗವಂತನು ಕ್ಷೇತ್ರ-ಜ್ಞ, ಅಥವಾ ಪ್ರಜ್ಞೆಯುಳ್ಳವನು, ಮತ್ತು ಜೀವರು (ಜೀವಿಗಳು) ಸಹ ಪ್ರಜ್ಞಾವಂತರು ಎಂದು ವಿವರಿಸಲಾಗಿದೆ. ಆದರೆ ವ್ಯತ್ಯಾಸವೇನೆಂದರೆ, ಜೀವಿಯು ತನ್ನ ಸೀಮಿತ ದೇಹದೊಳಗೆ ಜಾಗೃತನಾಗಿರುತ್ತಾನೆ, ಆದರೆ ಭಗವಂತನು ಎಲ್ಲಾ ದೇಹಗಳ ಬಗ್ಗೆ ಜಾಗೃತನಾಗಿರುತ್ತಾನೆ. ಈಶ್ವರಃ ಸರ್ವಭೂತಾನಾಂ ಹೃದ್-ದೇಶೆ ‘ರ್ಜುನ ತಿಷ್ಠತಿ (ಭ.ಗೀ 18.61). ಭಗವಂತನು ಪ್ರತಿಯೊಂದು ಜೀವಿಯಲ್ಲಿ, ಹೃದಯದ ಅಂತರಾಳದಲ್ಲಿ, ವಾಸಿಸುತ್ತಾನೆ. ಆದ್ದರಿಂದ, ಅವನು ನಿರ್ದಿಷ್ಟ ಜೀವದ ಮಾನಸಿಕ ಚಲನೆಗಳು, ಚಟುವಟಿಕೆಗಳ ಬಗ್ಗೆ ಜಾಗೃತನಾಗಿದ್ದಾನೆ. ನಾವು ಮರೆಯಬಾರದು. ಪರಮಾತ್ಮ ಅಥವಾ ದೇವೋತ್ತಮ ಪರಮಪುರುಷನು ಎಲ್ಲರ ಹೃದಯದಲ್ಲಿ ಈಶ್ವರನಾಗಿ, ನಿಯಂತ್ರಕನಾಗಿ ವಾಸಿಸುತ್ತಿದ್ದಾನೆ, ಮತ್ತು ನಿರ್ದೇಶನ ನೀಡುತ್ತಿದ್ದಾನೆ ಎಂದು ಸಹ ವಿವರಿಸಲಾಗಿದೆ. ಅವನು ನಿರ್ದೇಶನ ನೀಡುತ್ತಿದ್ದಾನೆ. ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಠಃ (ಭ.ಗೀ 15.15), ಎಲ್ಲರ ಹೃದಯದಲ್ಲೂ ಅವನು ನೆಲೆಗೊಂಡಿದ್ದಾನೆ, ಮತ್ತು ಆ ವ್ಯಕ್ತಿಯು ಬಯಸಿದಂತೆ ವರ್ತಿಸಲು ನಿರ್ದೇಶನವನ್ನು ನೀಡುತ್ತಾನೆ.

ಜೀವಿಯು ಏನು ಮಾಡಬೇಕೆಂದು ಮರೆತುಬಿಡುತ್ತಾನೆ. ಮೊದಲನೆಯದಾಗಿ, ಅವನು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಲು ದೃಢನಿಶ್ಚಯವನ್ನು ಮಾಡುತ್ತಾನೆ, ಮತ್ತು ನಂತರ ಅವನು ತನ್ನ ಸ್ವಂತ ಕರ್ಮದ ಕ್ರಿಯೆಗಳು ಮತ್ತು ಪ್ರತಿಕ್ರಿಯೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಆದರೆ ಒಂದು ರೀತಿಯ ದೇಹವನ್ನು ತ್ಯಜಿಸಿದ ನಂತರ, ಅವನು ಮತ್ತೊಂದು ರೀತಿಯ ದೇಹವನ್ನು ಪ್ರವೇಶಿಸಿದಾಗ... ನಾವು ಒಂದು ರೀತಿಯ ಉಡುಪನ್ನು ಇನ್ನೊಂದು ರೀತಿಯ ಉಡುಪಿಗಾಗಿ ತ್ಯಜಿಸಿದಂತೆಯೇ, ಭಗವದ್ಗೀತೆಯಲ್ಲಿ ವಾಸಾಂಸಿ ಜೀರ್ಣಾನಿ ಯಥಾ ವಿಹಾಯ (ಭ.ಗೀ 2.22) ಎಂದು ವಿವರಿಸಲಾಗಿದೆ. ಒಬ್ಬನು ತನ್ನ ವಿಭಿನ್ನ ಉಡುಗೆಗಳನ್ನು ಬದಲಾಯಿಸುವಂತೆ ಜೀವಿಗಳೂ ಸಹ ವಿಭಿನ್ನ ದೇಹಗಳನ್ನು ಬದಲಾಯಿಸುತ್ತಿವೆ, ಆತ್ಮದ ರೂಪಾಂತರ ಎನ್ನುತ್ತಾರೆ. ಮತ್ತು ಅವನ ಹಿಂದಿನ ಕಾರ್ಯಗಳ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಅದರೆ ಜೊತೆ ಹೋಗುತ್ತದೆ. ಒಬ್ಬ ಜೀವಿಯು ಸತ್ವಗುಣದಲ್ಲಿದ್ದಾಗ, ವಿವೇಕಿಯಾಗಿ, ಮತ್ತು ಅವನು ಯಾವ ರೀತಿಯ ಕಾರ್ಯಗಳನ್ನು ಮಾಡಬೇಕು ಎಂಬುದನ್ನು ಅರ್ಥಮಾಡಿಕೊಂಡರೆ, ಆಗ ಅವನ ಹಿಂದಿನ ಕಾರ್ಯಗಳ ಸಂಪೂರ್ಣ ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ಬದಲಾಯಿಸಬಹುದು. ಆದ್ದರಿಂದ, ಕರ್ಮವು ಶಾಶ್ವತವಲ್ಲ. ಈ ಐದು ವಸ್ತುಗಳಲ್ಲಿ - ಈಶ್ವರ, ಜೀವ, ಪ್ರಕೃತಿ, ಕಾಲ, ಮತ್ತು ಕರ್ಮ – ನಾಲ್ಕು ಅಂಶಗಳು ಮಾತ್ರ ಶಾಶ್ವತವಾಗಿವೆ, ಆದರೆ ಕರ್ಮವು ಶಾಶ್ವತವಲ್ಲ.

ಈಗ ಪ್ರಜ್ಞೆಯುಳ್ಳ ಈಶ್ವರ, ಪರಮಪ್ರಜ್ಞೆಯ ಈಶ್ವರ ಅಥವಾ ಭಗವಂತ, ಮತ್ತು ಜೀವಿಗಳ ನಡುವಿನ ವ್ಯತ್ಯಾಸವು ಪ್ರಸ್ತುತ ಪರಿಸ್ಥಿತಿಯಲ್ಲಿ ಹೀಗಿದೆ. ಪ್ರಜ್ಞೆ, ಭಗವಂತ ಮತ್ತು ಜೀವಿಗಳ ಪ್ರಜ್ಞೆ, ಅದು ಅತೀಂದ್ರಿಯವಾಗಿದೆ. ಈ ಪ್ರಜ್ಞೆಯು ಜಡವಸ್ತುವಿನ ಒಡನಾಟದಿಂದ ಉಂಟಾಗುವುದಿಲ್ಲ. ಇದು ತಪ್ಪು ಕಲ್ಪನೆ. ಭೌತಿಕ ಸಂಯೋಜನೆಯ ಕೆಲವು ಸಂದರ್ಭಗಳಲ್ಲಿ, ಪ್ರಜ್ಞೆ ಬೆಳೆಯುತ್ತದೆ ಎಂಬ ಸಿದ್ಧಾಂತವನ್ನು ಭಗವದ್ಗೀತೆಯು ನಿರಾಕರಿಸಿದೆ. ಅದು ಸಾಧ್ಯವಿಲ್ಲ. ಪ್ರಜ್ಞೆಯು ಭೌತಿಕ ಸಂದರ್ಭಗಳ ಆವರಣದಿಂದ ವಿಕೃತವಾಗಿ ಪ್ರತಿಬಿಂಬಿಸಬಹುದು, ಬಣ್ಣದ ಗಾಜಿನ ಮೂಲಕ ಪ್ರತಿಫಲಿಸುವ ಬೆಳಕು ಗಾಜಿನ ಬಣ್ಣಕ್ಕೆ ಅನುಗುಣವಾಗಿ ಕಾಣುವ ಹಾಗೆ. ಅಂತೆಯೇ, ಭಗವಂತನ ಪ್ರಜ್ಞೆಯು ಭೌತಿಕ ಪ್ರಭಾವಕ್ಕೆ ಒಳಗಾಗುವುದಿಲ್ಲ. ಕೃಷ್ಣ, ಪರಮಾತ್ಮನು ಹೇಳುತ್ತಾನೆ: ಮಯಾಧ್ಯಕ್ಷೇಣ ಪ್ರಕೃತಿ (ಭ.ಗೀ 9.10). ಅವನು ಈ ಭೌತಿಕ ಜಗತ್ತಿನಲ್ಲಿ ಅವತರಿಸಿದಾಗ, ಅವನ ಪ್ರಜ್ಞೆಯು ಭೌತಿಕ ಪ್ರಭಾವಕ್ಕೆ ಒಳಗಾಗುವುದಿಲ್ಲ. ಅವನ ಪ್ರಜ್ಞೆಯು ಭೌತಿಕ ಪ್ರಭಾವಕ್ಕೆ ಒಳಗಾಗಿದ್ದರೆ, ಭಗವದ್ಗೀತೆಯಲ್ಲಿ ಅಲೌಕಿಕ ವಿಷಯದ ಬಗ್ಗೆ ಮಾತನಾಡಲು ಅವನು ಅನರ್ಹನಾಗುತ್ತಿದ್ದ. ಭೌತಿಕವಾಗಿ ಕಲುಷಿತಗೊಂಡ ಪ್ರಜ್ಞೆಯಿಂದ ಮುಕ್ತರಾಗದೆ ಅಲೌಕಿಕ ಪ್ರಪಂಚದ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ.

ಭಗವಂತನು ಭೌತಿಕವಾಗಿ ಕಲುಷಿತನಾಗಿರಲಿಲ್ಲ. ಆದರೆ ನಮ್ಮ ಪ್ರಜ್ಞೆ, ಈಗ ಭೌತಿಕವಾಗಿ ಕಲುಷಿತವಾಗಿದೆ. ಆದ್ದರಿಂದ, ಭಗವದ್ಗೀತೆ ಬೋಧಿಸಿದಂತೆ, ನಾವು ಭೌತಿಕವಾಗಿ ಕಲುಷಿತಗೊಂಡ ಪ್ರಜ್ಞೆಯನ್ನು ಶುದ್ಧೀಕರಿಸಬೇಕು, ಮತ್ತು ಆ ಶುದ್ಧ ಪ್ರಜ್ಞೆಯಲ್ಲಿ ಕ್ರಿಯೆಗಳು ನಡೆಯುತ್ತವೆ. ಅದು ನಮಗೆ ಸಂತೋಷವನ್ನು ನೀಡುತ್ತದೆ. ನಾವು ನಿಲ್ಲಿಸಲು ಸಾಧ್ಯವಿಲ್ಲ. ನಾವು ನಮ್ಮ ಕಾರ್ಯಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಕಾರ್ಯಗಳನ್ನು ಶುದ್ಧೀಕರಿಸಬೇಕು. ಮತ್ತು ಈ ಪರಿಶುದ್ಧವಾದ ಕರ್ಮಗಳನ್ನು ಭಕ್ತಿ ಎಂದು ಕರೆಯಲಾಗುತ್ತದೆ. ಭಕ್ತಿ ಎಂದರೆ ಅವು ಸಾಮಾನ್ಯ ಚಟುವಟಿಕೆಯಂತೆ ಕಾಣುತ್ತವೆ, ಆದರೆ ಅವು ಕಲುಷಿತ ಚಟುವಟಿಕೆಗಳಲ್ಲ. ಅವು ಪರಿಶುದ್ಧ ಕರ್ಮಗಳು. ಆದ್ದರಿಂದ, ಒಬ್ಬ ಭಕ್ತನು ಸಾಮಾನ್ಯ ಮನುಷ್ಯನಂತೆ ಕೆಲಸ ಮಾಡುತ್ತಿರುವುದನ್ನು ಒಬ್ಬ ಅಜ್ಞಾನಿ ನೋಡಬಹುದು. ಆದರೆ ಜ್ಞಾನದ ಕೊರತೆಯಿರುವ ಈ ವ್ಯಕ್ತಿ, ಭಕ್ತನ ಕಾರ್ಯಗಳು ಅಥವಾ ಭಗವಂತನ ಕಾರ್ಯಗಳು ಅಶುದ್ಧ ಭೌತಿಕ ಪ್ರಜ್ಞೆ, ತ್ರಿಗುಣಗಳ ಅಶುದ್ಧತೆ, ಅಥವಾ ಪ್ರಕೃತಿಯ ಗುಣಗಳಿಂದ ಕಲುಷಿತವಾಗಿಲ್ಲ ಎಂದು ಅವನಿಗೆ ತಿಳಿದಿಲ್ಲ. ಅದು ಅಲೌಕಿಕ ಪ್ರಜ್ಞೆ. ಆದ್ದರಿಂದ, ನಮ್ಮ ಪ್ರಜ್ಞೆ ಭೌತಿಕವಾಗಿ ಕಲುಷಿತವಾಗಿದೆ ಎಂದು ನಾವು ತಿಳಿದುಕೊಳ್ಳಬೇಕು.