KN/Prabhupada 0194 - ಇವರು ಆದರ್ಶ ಪುರುಷರು



Lecture on SB 7.6.4 -- Toronto, June 20, 1976

ನಾವು ಶಾಸ್ತ್ರ-ವಿಧಿಯನ್ನು ಸ್ವೀಕರಿಸಬೇಕು. ಇದು ನಾಗರಿಕತೆಯ ನಿಜವಾದ ಪ್ರಗತಿ. ಏಕೆಂದರೆ ಜನ್ಮಜನ್ಮಾಂತರದಿಂದ ನಾವು ದೇವರೊಂದಿಗಿನ ನಮ್ಮ ಸಂಬಂಧವನ್ನು ಮರೆತುಬಿಟ್ಟಿದ್ದೇವೆ. ನಾವು ದೇವರೊಂದಿಗಿನ ನಮ್ಮ ಸಂಬಂಧವನ್ನು ಪುನರುಜ್ಜೀವನಗೊಳಿಸುವುದಕ್ಕೆ ಈ ಮಾನವ ರೂಪದ ಜೀವನ ಒಂದು ಏಕೈಕ ಅವಕಾಶ. ಚೈತನ್ಯ-ಚರಿತಾಮೃತದಲ್ಲಿ ‘ಅನಾದಿ ಬಹಿರ್-ಮುಖ ಜೀವ ಕೃಷ್ಣ ಭೂಲಿ ಗೆಲಾ ಆತೇವ ಕೃಷ್ಣ ವೇದ-ಪುರಾಣ ಕರಿಲಾʼ ಎಂದು ಹೇಳಲಾಗಿದೆ. ಈ ವೇದ, ಪುರಾಣಗಳು ಏಕೆ ಇವೆ? ವಿಶೇಷವಾಗಿ ಭಾರತದಲ್ಲಿ, ನಮಲ್ಲಿ ಹಲವಾರು ವೈದಿಕ ಸಾಹಿತ್ಯಗಳಿವೆ. ಮೊದಲನೆಯದಾಗಿ, ನಾಲ್ಕು ವೇದಗಳು - ಸಾಮ, ಯಜುರ್, ಋಗ್, ಅಥರ್ವ. ನಂತರ ವೇದಗಳ ತತ್ವದ ಸಾರಾಂಶವಾದ ವೇದಾಂತ-ಸೂತ್ರ. ನಂತರ ವೇದಾಂತ ವಿವರಣೆ, ಪುರಾಣಗಳು. ಪುರಾಣ ಎಂದರೆ ಪೂರಕ ಎಂದರ್ಥ. ಸಾಮಾನ್ಯ ವ್ಯಕ್ತಿಗಳಿಗೆ ವೇದ ಭಾಷೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಐತಿಹಾಸಿಕ ಉಲ್ಲೇಖಗಳಿಂದ ಈ ವೈದಿಕ ತತ್ವಗಳನ್ನು ಕಲಿಸಲಾಗುತ್ತದೆ. ಅದನ್ನೇ ಪುರಾಣಗಳು ಎಂದು ಕರೆಯುತ್ತಾರೆ. ಮತ್ತು ಶ್ರೀಮದ್-ಭಾಗವತವನ್ನು ಮಹಾ-ಪುರಾಣ ಎಂದು ಕರೆಯಲಾಗುತ್ತದೆ. ಇದು ನಿಷ್ಕಳಂಕ ಪುರಾಣ, ಶ್ರೀಮದ್-ಭಾಗವತ, ಏಕೆಂದರೆ ಇತರ ಪುರಾಣಗಳಲ್ಲಿ ಭೌತಿಕ ಚಟುವಟಿಕೆಗಳಿವೆ, ಆದರೆ ಈ ಶ್ರೀಮದ್-ಭಾಗವತಂ ಮಹಾ-ಪುರಾಣದಲ್ಲಿ ಕೇವಲ ಆಧ್ಯಾತ್ಮಿಕ ಚಟುವಟಿಕೆಗಳಿವೆ. ಅದು ಅವಶ್ಯಕ. ಆದ್ದರಿಂದ, ಈ ಶ್ರೀಮದ್-ಭಾಗವತವನ್ನು ನಾರದರ ಆದೇಶದ ಮೇರೆಗೆ ವ್ಯಾಸದೇವರು ಬರೆದರು. ಮಹಾ-ಪುರಾಣ. ಹಾಗಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಎಷ್ಟೊಂದು ಅಮೂಲ್ಯ ಸಾಹಿತ್ಯಗಳಿವೆ. ಮಾನವ ಜೀವನವು ಅದಕ್ಕಾಗಿಯೇ ಇರುವುದು. ಯಾಕೆ ನಿರ್ಲಕ್ಷ್ಯ ಮಾಡುತ್ತಿದ್ದೀರಿ? ನಮ್ಮ ಪ್ರಯತ್ನವೇನೆಂದರೆ, ಈ ಕೃಷ್ಣ ಪ್ರಜ್ಞೆಯ ಆಂದೋಲನವು ವೇದಗಳು ಮತ್ತು ಪುರಾಣಗಳ ಈ ಜ್ಞಾನವನ್ನು ಹೇಗೆ ಹರಡುವುದು, ಮತ್ತು ಹೇಗೆ ಇದರಿಂದ ಮಾನವನು ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು, ಮತ್ತು ಅವನ ಜೀವನವನ್ನು ಯಶಸ್ವಿಗೊಳಿಸಬಹುದು ಎಂದು. ಇಲ್ಲವಾದರೆ, ಹಗಲಿರುಳು ಕಷ್ಟಪಟ್ಟು ದುಡಿದರೆ... "ಮಲ ಎಲ್ಲಿದೆ? ಮಲ ಎಲ್ಲಿದೆ?" ಎಂದು ಹುಡುಕಲು ಹಂದಿ ಹಗಲು ರಾತ್ರಿ ಬಹಳ ಶ್ರಮಪಡುತ್ತದೆ. ಮತ್ತು ಮಲ ತಿಂದ ನಂತರ, ಸ್ವಲ್ಪ ಕೊಬ್ಬು ಬಂದ ತಕ್ಷಣ... ಹಂದಿಗಳು ಕೊಬ್ಬಾಗಿರುತ್ತವೆ, ಏಕೆಂದರೆ ಮಲವು ಆಹಾರದ ಎಲ್ಲಾ ಸಾರವನ್ನು ಹೊಂದಿರುತ್ತದೆ. ವೈದ್ಯಕೀಯ ವಿಜ್ಞಾನದ ಪ್ರಕಾರ, ಮಲವು ಹೈಡ್ರೋಫಾಸ್ಫೇಟ್ಗಳಿಂದ ತುಂಬಿರುತ್ತದೆ. ಆದ್ದರಿಂದ ಹೈಡ್ರೋಫಾಸ್ಫೇಟ್ ಉತ್ತಮ ಟಾನಿಕ್ ಆಗಿದೆ. ಯಾರಾದರು ಇಷ್ಟಪಟ್ಟರೆ ಪ್ರಯತ್ನಿಸಬಹುದು. (ನಗು) ಆದರೆ ವಾಸ್ತವವಾಗಿ ಇದು ಸತ್ಯ. ಮಲವಾಗಿರುವ ಕಾರಣ ಹಂದಿ ತುಂಬಾ ಕೊಬ್ಬಾಗುತ್ತದೆ.

ಆದ್ದರಿಂದ, ಈ ಜೀವನವು ಹಂದಿಯಾಗಲು ಉದ್ದೇಶಿಸಿಲ್ಲ. ಒಬ್ಬ ಸಂತ ವ್ಯಕ್ತಿಯಾಗಬೇಕು. ಅದೇ ಮಾನವ ನಾಗರಿಕತೆ. ಆದ್ದರಿಂದ, ವೈದಿಕ ನಾಗರೀಕತೆಯಲ್ಲಿ - ಬ್ರಾಹ್ಮಣರು, ಫ್ರಥಮ ದರ್ಜೆಯ ಪುರುಷರು. ಈಗಿನ ಸಮಾಜದಲ್ಲಿ ಪ್ರಥಮ ದರ್ಜೆಯ ಪುರುಷರು ಇಲ್ಲ. ಎಲ್ಲರೂ ಮೂರನೇ ದರ್ಜೆ, ನಾಲ್ಕನೇ ದರ್ಜೆ, ಐದನೇ ದರ್ಜೆ. ಸತ್ಯ-ಶಮ-ದಮ-ತಿತ್ಕ್ಷ ಆರ್ಜವ ಜ್ಞಾನಂ-ವಿಜ್ಞಾನಂ ಆಸ್ತಿಕ್ಯಂ ಬ್ರಹ್ಮ-ಕರ್ಮ ಸ್ವಭಾವ-ಜಂ (ಭ.ಗೀ 18.42). ಇದು ಪ್ರಥಮ ದರ್ಜೆ ಮನುಷ್ಯ. ಸತ್ಯವಂತ, ಅತ್ಯಂತ ಶಾಂತಿಯುತ, ಜ್ಞಾನದಿಂದ ತುಂಬಿದ, ಅತ್ಯಂತ ಸರಳ, ಸಹಿಷ್ಣು, ಮತ್ತು ಶಾಸ್ತ್ರದಲ್ಲಿ ನಂಬಿಕೆಯುಳ್ಳವನು. ಇವು ಪ್ರಥಮ ದರ್ಜೆ ಪುರುಷರ ಲಕ್ಷಣಗಳು. ಹಾಗಾದರೆ ಇಡೀ ಪ್ರಪಂಚದಾದ್ಯಂತ ಆ ಪ್ರಥಮ ದರ್ಜೆ ಮನುಷ್ಯ ಎಲ್ಲಿದ್ದಾನೆ? ಆದ್ದರಿಂದ, ಈ ಕೃಷ್ಣ ಪ್ರಜ್ಞೆಯ ಆಂದೋಲನವು ಪ್ರಥಮ ದರ್ಜೆ ವ್ಯಕ್ತಿಗಳ ಕನಿಷ್ಠ ಒಂದು ವಿಭಾಗವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇದರಿಂದ ಜನರು "ಓಹ್, ಇವರು ಆದರ್ಶ ಪುರುಷರು", ಎಂದು ನೋಡಬಹುದು. ಆದ್ದರಿಂದ, ಈ ಕೃಷ್ಣ ಪ್ರಜ್ಞೆಯ ಆಂದೋಲನಕ್ಕೆ ಸೇರಿರುವ ವ್ಯಕ್ತಿಗಳಿಗೆ ನನ್ನ ವಿನಂತಿ ಏನೆಂದರೆ, ಅವರು ಬಹಳ ಎಚ್ಚರಿಕೆಯಿಂದ ಅವರನ್ನು ಪ್ರಥಮ ದರ್ಜೆ ಪುರುಷರಂತೆ ಇರಿಸಿಕೊಳ್ಳಬೇಕು. ಜನರು ಅವರನ್ನು ಮೆಚ್ಚುತ್ತಾರೆ ಮತ್ತು ಅನುಸರಿಸಲು ಪ್ರಯತ್ನಿಸುತ್ತಾರೆ. ಯದ್ ಯದ್ ಆಚರತಿ ಶ್ರೇಷ್ಠಸ್ ತತ್ ತದ್ ಏವತರೋ ಜನಃ (ಭ.ಗೀ 3.21). ಮೊದಲ ದರ್ಜೆಯ ಪುರುಷರ ವರ್ಗವಿದ್ದರೆ ಜನರು ಮೆಚ್ಚುತ್ತಾರೆ. ಕನಿಷ್ಠ, ಅವರು ಪ್ರಥಮ ದರ್ಜೆಯಾಗಲು ಸಾಧ್ಯವಾಗದಿದ್ದರೂ ಅನುಸರಿಸಲು ಪ್ರಯತ್ನಿಸುತ್ತಾರೆ. ಅವರು ಅನುಸರಿಸಲು ಪ್ರಯತ್ನಿಸುತ್ತಾರೆ. ತತ್ ತದ್ ಏವ, ಸ ಯತ್ ಪ್ರಮಾಣಂ ಕುರುತೇ ಲೋಕಸ್ ತದ್ ಅನುವರ್ತತೇ. ಹಾಗಾಗಿ ಪ್ರಥಮ ದರ್ಜೆಯ ಮನುಷ್ಯನ ಅಗತ್ಯವಿದೆ. ಅವನು ಹೇಗೆ ವರ್ತಿಸುತ್ತಾನೋ, ಇತರರು ಅನುಸರಿಸುತ್ತಾರೆ. ಶಿಕ್ಷಕನು ಧೂಮಪಾನ ಮಾಡದಿದ್ದರೆ, ವಿದ್ಯಾರ್ಥಿಗಳು ಸಹ ಸಹಜವಾಗಿ ಧೂಮಪಾನವನ್ನು ನಿಲ್ಲಿಸುತ್ತಾರೆ. ಆದರೆ ಶಿಕ್ಷಕನು ಧೂಮಪಾನ ಮಾಡುತ್ತಿದ್ದರೆ, ವಿದ್ಯಾರ್ಥಿಗಳು ಹೇಗೆ...? ತರಗತಿಯಲ್ಲೂ ಧೂಮಪಾನ ಮಾಡುತ್ತಿದ್ದಾರೆ. ನಾನು ನ್ಯೂಯಾರ್ಕ್‌ನಲ್ಲಿ ನೋಡಿದ್ದೇನೆ. ಕನಿಷ್ಠ ಭಾರತದಲ್ಲಿ ಇದು ಇನ್ನೂ ಪ್ರಾರಂಭವಾಗಿಲ್ಲ. ಇದು ಪ್ರಾರಂಭವಾಗುತ್ತದೆ. ಏಕೆಂದರೆ ಅವರೂ ಪ್ರಗತಿ ಸಾಧಿಸುತ್ತಿದ್ದಾರೆ. (ನಗು) ಈ ಧೂರ್ತರೂ ಸಹ ಪ್ರಗತಿ ಸಾಧಿಸುತ್ತಿದ್ದಾರೆ, ನರಕಕ್ಕೆ ಹೋಗುತ್ತಿದ್ದಾರೆ. (ನಗು)

ಆದ್ದರಿಂದ, ಪ್ರಹ್ಲಾದ ಮಹಾರಾಜರು ತಥಾಕಥಿತ ಆರ್ಥಿಕ ಅಭಿವೃದ್ಧಿ ಮತ್ತು ಅಸಂಬದ್ಧ ಚಟುವಟಿಕೆಗಳಲ್ಲಿ ನಿಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಸಲಹೆ ನೀಡುತ್ತಾರೆ. ಮುಕುಂದನ ಭಕ್ತನಾಗಲು ಪ್ರಯತ್ನಿಸಿ. ಆಗ ನಿಮ್ಮ ಜೀವನ ಯಶಸ್ವಿಯಾಗುತ್ತದೆ.