KN/Prabhupada 0220 - ಪ್ರತಿಯೊಂದು ಜೀವಿಯು ಭಗವಂತನ ಭಾಗಾಂಶ



Arrival Lecture -- Paris, July 20, 1972

ಆಧ್ಯಾತ್ಮಿಕ ವೇದಿಕೆಯಲ್ಲಿರುವ ಒಬ್ಬ ವಿದ್ವಾಂಸನಿಗೆ, "ಇದು ನಾಯಿ ಮತ್ತು ಇವನು ವಿದ್ವಾಂಸ ಬ್ರಾಹ್ಮಣನು", ಎಂದು ತಿಳಿದಿದೆ. ಕರ್ಮಾನುಸಾರವಾಗಿ ಅವರಿಗೆ ಬೇರೆ ಬೇರೆ ಉಡುಗೆಗಳಿವೆ, ಆದರೆ ಬ್ರಾಹ್ಮಣನೊಳಗೆ ಹಾಗು ನಾಯಿಯೊಳಗೆ ಒಂದೇ ಆತ್ಮವಿದೆ." ಆದ್ದರಿಂದ, ನಮ್ಮ ಭೌತಿಕ ನೆಲೆಯಲ್ಲಿ ನಾವು, "ನಾನು ಭಾರತೀಯ, ನೀನು ಫ್ರೆಂಚ್, ಅವನು ಇಂಗ್ಲಿಷ್, ಅವನು ಅಮೇರಿಕನ್, ಅವನು ಬೆಕ್ಕು, ಅವನು ನಾಯಿ", ಎಂದು ಪ್ರತ್ಯೇಕಿಸುತ್ತೇವೆ. ಇದು ಭೌತಿಕ ನೆಲೆಯ ದೃಷ್ಟಿ. ಆಧ್ಯಾತ್ಮಿಕ ನೆಲೆಯಲ್ಲಿ ಪ್ರತಿಯೊಂದು ಜೀವಿಯೂ ಭಗವಂತನ ಭಾಗಾಂಶವೆಂದು ನಾವು ಕಾಣಬಹುದು. ಇದನ್ನು ಭಗವದ್ಗೀತೆಯಲ್ಲಿ ದೃಢೀಕರಿಸಲಾಗಿದೆ: ಮಾಮ್ ಏವಾಂಶ ಜೀವ-ಭೂತ (ಭ.ಗೀ 15.7). ಪ್ರತಿಯೊಂದು ಜೀವಿ. ಅವನು ಏನೆಂಬುದು ಮುಖ್ಯವಲ್ಲ. 8,400,000 ಜೀವರಾಶಿಗಳು, ಅವೆಲ್ಲವು ಕೇವಲ ವಿಭಿನ್ನ ಉಡುಪುಗಳಿಂದ ಆವರಿಸಲ್ಪಟ್ಟಿವೆ. ನಿವು ಫ್ರೆಂಚ್ ಜನರಂತೆ. ನೀವು ವಿಭಿನ್ನವಾಗಿ ಉಡುಪು ಧರಿಸಿರಬಹುದು ಮತ್ತು ಇಂಗ್ಲಿಷ್ ವ್ಯಕ್ತಿಯು ವಿಭಿನ್ನವಾಗಿ ಉಡುಪು ಧರಿಸಿರಬಹುದು. ಉಡುಗೆ ತೊಡುಗೆ ಬಹಳ ಮುಖ್ಯವಲ್ಲ. ಉಡುಪಿನೊಳಗಿನ ಮನುಷ್ಯನು ಮುಖ್ಯ. ಅದೇ ರೀತಿ, ಈ ದೇಹವು ಬಹಳ ಮುಖ್ಯವಲ್ಲ. ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾಃ ಶರೀರಿಣಃ (ಭ.ಗೀ 2.18): ಈ ದೇಹವು ನಶ್ವರ, ಆದರೆ ದೇಹದೊಳಗಿನ ಆತ್ಮವು ಅನಶ್ವರ. ಆದ್ದರಿಂದ, ಈ ಮಾನವ ಜೀವನವು ಅಕ್ಷಯವಾದ ಆತ್ಮದ ಜ್ಞಾನವನ್ನು ಬೆಳೆಸುವುದಕ್ಕಾಗಿಯೇ ಇರುವುದು.

ದುರದೃಷ್ಟವಶಾತ್, ನಮ್ಮ ವಿಜ್ಞಾನ, ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ತತ್ವಶಾಸ್ತ್ರವು ಕೇವಲ ಕ್ಷಯವಾದದ್ದರ ಬಗ್ಗೆ ಕಾಳಜಿ ವಹಿಸುತ್ತದೆ, ಅಕ್ಷಯವಾದದ್ದರ ಬಗ್ಗೆ ಅಲ್ಲ. ಅಕ್ಷಯವಾದದ್ದನ್ನು ಪರಿಗಣಿಸುವುದೇ ಈ ಕೃಷ್ಣ ಪ್ರಜ್ಞೆ ಚಳುವಳಿಯ ಉದ್ದೇಶ. ಆದ್ದರಿಂದ, ಇದು ಆತ್ಮದ ಚಳುವಳಿಯು; ರಾಜಕೀಯ, ಸಾಮಾಜಿಕ, ಅಥವಾ ಧಾರ್ಮಿಕ ಚಳುವಳಿಯಲ್ಲ. ಅವು ಕ್ಷಯವಾದ ದೇಹಕ್ಕೆ ಸಂಬಂಧಿಸಿವೆ. ಆದರೆ ಕೃಷ್ಣ ಪ್ರಜ್ಞೆ ಚಳುವಳಿಯು ಅಕ್ಷಯವಾದ ಆತ್ಮಕ್ಕೆ ಸಂಬಂಧಿಸಿದೆ. ಆದ್ದರಿಂದ, ನಮ್ಮ ಈ ಸಂಕೀರ್ತನಾ ಚಳುವಳಿ, ಈ ಹರೇ ಕೃಷ್ಣ ಮಂತ್ರವನ್ನು ಜಪಿಸುವುದರಿಂದ, ನಿಮ್ಮ ಹೃದಯವು ಕ್ರಮೇಣ ಶುದ್ಧವಾಗಿ ನೀವು ಆಧ್ಯಾತ್ಮಿಕ ನೆಲೆಯನ್ನು ತಲುಪಬಹುದು. ಈ ಚಳುವಳಿಯಲ್ಲಿ ಪ್ರಪಂಚದ ಎಲ್ಲಾ ದೇಶಗಳಿಂದ, ಎಲ್ಲಾ ಧರ್ಮಗಳಿಂದ ವಿದ್ಯಾರ್ಥಿಗಳು ಸೇರಿದ್ದಾರೆ. ಆದರೆ ಅವರು ಇನ್ನು ಮುಂದೆ ನಿರ್ದಿಷ್ಟ ರೀತಿಯ ಧರ್ಮ, ರಾಷ್ಟ್ರ, ಪಂಥ, ಅಥವಾ ಬಣ್ಣದ ಬಗ್ಗೆ ಯೋಚಿಸುವುದಿಲ್ಲ. ಇಲ್ಲ. ಅವರೆಲ್ಲರೂ ಕೃಷ್ಣನ ಭಾಗಾಂಶವೆಂದು ತಿಳಿಯುತ್ತಾರೆ. ನಾವು ಆ ನೆಲೆ ತಲುಪಿದಾಗ ಮತ್ತು ಆ ಸ್ಥಾನದಲ್ಲಿ ನಮ್ಮ ಆತ್ಮವನ್ನು ತೊಡಗಿಸಿಕೊಂಡಾಗ ಮುಕ್ತರಾಗುತ್ತೇವೆ.

ಆದ್ದರಿಂದ, ಈ ಚಳುವಳಿ ಅತಿಮುಖ್ಯವಾದ ಚಳುವಳಿ. ಕೆಲವು ನಿಮಿಷಗಳಲ್ಲಿ ನಿಮಗೆ ಎಲ್ಲಾ ವಿವರಗಳನ್ನು ನೀಡಲು ಸಾಧ್ಯವಿಲ್ಲ. ನೀವು ಆಸಕ್ತರಾದರೆ ನಮ್ಮನ್ನು ಸಂಪರ್ಕಿಸಬಹುದು. ಪತ್ರವ್ಯವಹಾರದ ಮೂಲಕ, ನಮ್ಮ ಸಾಹಿತ್ಯವನ್ನು ಓದುವ ಮೂಲಕ ಅಥವಾ ವೈಯಕ್ತಿಕ ಸಂಪರ್ಕದ ಮೂಲಕ ನಮ್ಮನ್ನು ಸಂಪರ್ಕಿಸಬಹುದು. ಯಾವುದೇ ರೀತಿಯಾದರು ನಿಮ್ಮ ಜೀವನವು ಭವ್ಯವಾಗಿರುತ್ತದೆ. "ಇದು ಭಾರತ," "ಇದು ಇಂಗ್ಲೆಂಡ್," "ಇದು ಫ್ರಾನ್ಸ್," "ಇದು ಆಫ್ರಿಕಾ", ಎಂಬ ವ್ಯತ್ಯಾಸ ನಮಗಿಲ್ಲ. ನಾವು ಪ್ರತಿಯೊಂದು ಜೀವಿಯೂ, ಮನುಷ್ಯರು ಮಾತ್ರವಲ್ಲದೆ, ಪ್ರಾಣಿಗಳು, ಪಕ್ಷಿಗಳು, ಮೃಗಗಳು, ಮರಗಳು, ಜಲಚರಗಳು, ಕೀಟಗಳು, ಸರೀಸೃಪಗಳು - ಎಲ್ಲವೂ ಭಗವಂತನ ಭಾಗಾಂಶವೆಂದು ಭಾವಿಸುತ್ತೇವೆ.