KN/Prabhupada 1063 - ಕರ್ಮಫಲಗಳಿಂದ ಬಿಡುಗಡೆ ಕೊಡುತ್ತದೆ



660219-20 - Lecture BG Introduction - New York

ಈ ಜೀವನದಲ್ಲಿ ನಾವು ಕರ್ಮಫಲಗಳನ್ನು ಅನುಭವಿಸುತ್ತಿದ್ದೇವೆ. ಉದಾಹರಣೆಗೆ, ನಾನೊಬ್ಬ ವ್ಯವಹಾರ ವ್ಯಾಪಾರಿಯಾಗಿದ್ದು, ಬುದ್ಧಿವಂತನಾಗಿ ಬಹಳ ಕಷ್ಟಪಟ್ಟು ಬ್ಯಾಂಕಿನಲ್ಲಿ ಬಹಳಷ್ಟು ಹಣವನ್ನಿಟ್ಟುಕೊಂಡರೆ ನಾನು ಸುಖಿ. ಹಾಗೆಯೇ, ಬಹಳಷ್ಟು ಹಣ ಹಾಕಿ, ವ್ಯಾಪಾರ ಶುರುಮಾಡಿ ವ್ಯಾಪಾರದಲ್ಲಿ ಹಣವನ್ನೆಲ್ಲಾ ಕಳೆದುಕೊಂಡರೆ ನಾನು ದುಃಖಿ. ಇದೇ ರೀತಿಯಲ್ಲಿ ಬದುಕಿನ ಪ್ರತಿಯೊಂದು ಕ್ಷೇತ್ರದಲ್ಲಿ ನಮ್ಮ ಕರ್ಮಫಲವನ್ನು ಅನುಭವಿಸುತ್ತೇವೆ. ಇದಕ್ಕೆ ಕರ್ಮ ಎಂದು ಹೆಸರು. ಭಗವದ್ಗೀತೆಯಲ್ಲಿ ಈಶ್ವರ, ಜೀವಿ, ಭೌತಿಕ ಪ್ರಕೃತಿ, ಕಾಲ, ಮತ್ತು ಕರ್ಮಗಳನ್ನು ಇವೆಲ್ಲವುಗಳನ್ನು ವಿವರಿಸಲಾಗಿದೆ. ಈ ಐವರಲ್ಲಿ ಈಶ್ವರ, ಜೀವಿಗಳು, ಭೌತಿಕ ಪ್ರಕೃತಿ, ಮತ್ತು ಕಾಲ ಈ ನಾಲ್ಕು ಶಾಶ್ವತವಾದವು. ಪ್ರಕೃತಿಯ ಅಭಿವ್ಯಕ್ತಿ ತಾತ್ಕಾಲಿಕವಾಗಿರಬಹುದು, ಆದರೆ ಹುಸಿಯಲ್ಲ. ಕೆಲವು ತತ್ವಶಾಸ್ತ್ರಜ್ಞರು ಭೌತಿಕ ಪ್ರಕೃತಿಯ ಅಭಿವ್ಯಕ್ತಿ ಹುಸಿಯಾದುದು ಎನ್ನುತ್ತಾರೆ. ಆದರೆ ಭಗವದ್ಗೀತೆ ಅಥವಾ ವೈಷ್ಣವ ಸಿದ್ಧಾಂತದ ಪ್ರಕಾರ ಇದು ಸರಿಯಲ್ಲ, ಅವರು ಜಗತ್ತಿನ ಅಭಿವ್ಯಕ್ತಿ ಹುಸಿ ಎಂದು ನಂಬುವುದಿಲ್ಲ. ಅವರು ಅಭಿವ್ಯಕ್ತಿ ನಿಜವಾದುದು, ಆದರೆ ಅಶಾಶ್ವತ ಎಂದು ಒಪ್ಪಿಕೊಳ್ಳುತ್ತಾರೆ. ಇದಕ್ಕೆ ಮೋಡಗಳ ಮತ್ತು ಮಳೆಗಾಲದ ಉದಾಹರಣೆ ನೀಡಿದ್ದಾರೆ. ಮಳೆಗಾಲದಲ್ಲಿ ನಾವು ಎಲ್ಲ ಕಡೆ ಹಚ್ಚ ಹಸುರಿನ ಬೆಳೆಗಳನ್ನು ನೋಡುತ್ತೇವೆ. ಮಳೆಗಾಲ ಮುಗಿಯುತ್ತಲೇ ಮೋಡಗಳು ಕಾಣೆಯಾಗುತ್ತವೆ. ನಿಧಾನವಾಗಿ ಬೆಳೆಗಳೆಲ್ಲಾ ಒಣಗಿ ಭೂಮಿ ಬಂಜರಾಗುತ್ತದೆ. ಇದೇ ರೀತಿ ಭೌತಿಕ ಪ್ರಕೃತಿಯು ಒಂದು ವಿಶಿಷ್ಟ ಅವಧಿಯಲ್ಲಿ ಆಗುತ್ತದೆ, ಇದನ್ನು ಭಗವದ್ಗೀತೆಯಿಂದ ತಿಳಿಯಬಹುದು, ಭೂತ್ವಾ ಭೂತ್ವಾ ಪ್ರಳಿಯತೆ (ಭ ಗೀತೆ 8.19) ಪ್ರಕೃತಿ ಕೆಲಕಾಲ ಇರುತ್ತದೆ, ನಂತರ ನಶಿಸುತ್ತದೆ. ಇದು ಪ್ರಕೃತಿಯ ಕಾರ್ಯದ ರೀತಿ, ಈ ಚಕ್ರವು ನಿರಂತರವಾಗಿ ಸಾಗುತ್ತದೆ, ಆದ್ದರಿಂದ ಪ್ರಕೃತಿಯು ನಿರಂತರ. ಇದು ಹುಸಿಯಲ್ಲಿಯ, ಏಕೆಂದರೆ ಭಗವಂತ ಮಾಂ ಪ್ರಕೃತಿ, ನನ್ನ ಪ್ರಕೃತಿ ಎಂದು ಒಪ್ಪಿಕೊಳ್ಳುತ್ತಾನೆ. ಅಪರೇಯಂ ಇತಸ್ ತು ವಿದ್ಧಿ ಮೇ ಪ್ರಕೃತಿಂ ಪರಾಂ (ಭ ಗೀತೆ 7.5) ಭಿನ್ನಾ ಪ್ರಕೃತಿ, ಅಪರಾ ಪ್ರಕೃತಿ, ಭೌತಿಕ ಪ್ರಕೃತಿ ಭಗವಂತನಿಂದ ಬೇರ್ಪಟ್ಟ ಶಕ್ತಿ. ಮತ್ತು ಜೀವಿಗಳು, ಅವರೂ ಭಗವಂತನ ಶಕ್ತಿಯೇ, ಆದರೆ ಬೇರ್ಪಟ್ಟವರಲ್ಲ. ಅವರು ಶಾಶ್ವತವಾದ ಸಂಬಂದ ಹೊಂದಿರುವವರು. ಆದ್ದರಿಂದ ಈಶ್ವರ, ಜೀವಿ, ಪ್ರಕೃತಿ, ಕಾಲ ಎಲ್ಲವು ಸನಾತನವಾದದ್ದು. ಆದರೆ ಕರ್ಮ ಸನಾತನವಲ್ಲ. ಕರ್ಮಫಲಗಳು ಬಹು ಪ್ರಾಚೀನವಾಗಿರಬಹುದು, ನೆನಪಿಗೆ ಸಿಕ್ಕದ ಪ್ರಾಚೀನ ಕಾಲದಿಂದ ನಾವು ನಮ್ಮ ಕರ್ಮಫಲಗಳನ್ನು ಅನುಭವಿಸುತ್ತಿದ್ದೇವೆ. ಆದರೂ ನಾವು ಕರ್ಮಫಲಗಳನ್ನು ಬದಲಾಯಿಸಬಹುದು. ಅದು ನಮ್ಮ ಪರಿಪೂರ್ಣ ಜ್ಞಾನದ ಮೇಲೆ ಅವಲಂಬಿತವಾಗಿದೆ. ನಾವು ಖಚಿತವಾಗಿ ವಿವಿಧ ಕರ್ಮಗಳಲ್ಲಿ ತೊಡಗಿದ್ದೇವೆ. ಆದರೆ ನಮಗೆ ಎಲ್ಲಾ ಕರ್ಮಫಲಗಳಿಂದ ಬಿಡುಗಡೆ ಪಡೆಯಲು ಯಾವ ರೀತಿಯ ಕರ್ಮಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿದಿಲ್ಲ. ಇದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ. ಈಶ್ವರನ ಸ್ಥಾನ ಪರಮ ಪ್ರಜ್ನೆಯದು. ಈಶ್ವರನ ಅಥವಾ ಭಗವಂತನ ಸ್ಥಾನ ಪರಮ ಪ್ರಜ್ನೆಯದು. ಮತ್ತು ಜೀವಿಗಳು ಭಗವಂತನ ವಿಭಿನ್ನ ಅಂಶಗಳಾದುದರಿಂದ ಅವರೂ ಕೂಡ ಪ್ರಜ್ಞಾವಂತರು. ಜೀವಿಯೂ ಕೂಡ ಪ್ರಜ್ಞಾವಂತ. ಜೀವಿಯನ್ನು ಮತ್ತು ಐಹಿಕ ನಿಸರ್ಗವನ್ನು, ಎರಡನ್ನೂ ಪ್ರಕೃತಿ ಅಥವಾ ಶಕ್ತಿ ಎಂದಿದ್ದಾರೆ. ಈ ಎರಡೂ ಪ್ರಕೃತಿಗಳಲ್ಲಿ ಜೀವಿಗೆ ಪ್ರಜ್ಞೆ ಇದೆ. ಇನ್ನೊಂದು ಪ್ರಕೃತಿ (ಐಹಿಕ ಪ್ರಕೃತಿ)ಗೆ ಪ್ರಜ್ಞೆ ಇಲ್ಲ, ಅದೇ ವ್ಯತ್ಯಾಸ. ಆದ್ದರಿಂದ ಭಗವಂತನ ಪ್ರಜ್ಞೆಯನ್ನು ಹೋಲುವ ಜೀವಿ ಪ್ರಕೃತಿಯನ್ನು ಉನ್ನತ ಎಂದಿದ್ದಾರೆ. ಭಗವಂತನದು ಪರಮ ಪ್ರಜ್ಞೆ, ಜೀವಿ ಎಂದಿಗೂ ಪರಮ ಪ್ರಜ್ಞೆ ಹೊಂದಿರಲಾರ. ಇಲ್ಲ. ಜೀವಿಯು ಪರಿಪೂರ್ಣತೆಯ ಯಾವುದೇ ಹಂತದಲ್ಲಿಯೂ ಪರಮ ಪ್ರಜ್ಞಾವಂತನಾಗುವುದಕ್ಕೆ ಸಾಧ್ಯವಿಲ್ಲ. ಇದು ತಪ್ಪಾದ ಸಿದ್ಧಾಂತ. ಇದು ತಪ್ಪಾದ ಸಿದ್ಧಾಂತ. ಜೀವಿಗೆ ಪ್ರಜ್ಞೆ ಇದೆ ಅಷ್ಟೇ,, ಆದರೆ ಪರಮ ಪ್ರಜ್ಞೆ ಅಲ್ಲ.